ಹೂವಿನಹೊಳೆ ಪ್ರತಿಷ್ಠಾನ

 ಹೂವಿನಹೊಳೆ ಪ್ರತಿಷ್ಠಾನ ಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಕೆಳಗಿನ ವೆಬ್ ಸೈಟ್ ನಲ್ಲಿ ಲಭ್ಯ 

About Hoovinahole foundation | ProjectHeena

ಧನ್ಯವಾದಗಳು ಸರ್






'ನೋಡ ನೋಡ್ ತಾನೆ ಯಾವ ಮಟ್ಟಕ್ಕೆ ಬೆಳದ್ ಬಿಟ್ಟ ಈ ಹಳ್ಳಿ ಹುಡುಗ !!
''
ಸಭೆಯೊಂದರಲ್ಲಿ ನನ್ನ ಬಗ್ಗೆ ಹಿತೈಷಿ ಒಬ್ಬರು ಹೇಳಿದ ಮಾತು ಇದು..

ಗೊತ್ತಿಲ್ಲ ಅವರು ಯಾವ ಅರ್ಥದಲ್ಲಿ ಹೇಳುದ್ರು ಅಂತ ??
....  ಧನ್ಯವಾದಗಳು ಸರ್ 

" ಹಲವು ಜೀವ ಪ್ರಭೇದ- ಒಂದು ಭೂಮಿ, ಒಂದೇ ಭವಿಷ್ಯ"

" ಹಲವು ಜೀವ ಪ್ರಭೇದ- ಒಂದು ಭೂಮಿ, ಒಂದೇ ಭವಿಷ್ಯ"
 

ನೇಮಕ

ರಾಜ್ಯ ಒಕ್ಕಲಿಗರ ಒಕ್ಕೂಟ-ವಿದ್ಯಾರ್ಥಿ ಘಟಕದ ಅಧ್ಯಕ್ಷರನ್ನಾಗಿ ವಿಜಯ ಸಂಜೆ ಕಾಲೇಜಿನ ನಂದಿ ಜೆ ಹೂವಿನಹೊಳೆ ರವರನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯ ಒಕ್ಕಲಿಗರ ಒಕ್ಕೂಟದ ರಾಜ್ಯಾಧ್ಯಕ್ಷರಾದ ಎಂ.ಆರ್,ವೆಂಕಟೇಶ್ ಮತ್ತು ಪ್ರಧಾನ ಕಾರ್ಯದರ್ಶಿಗಳಾದ ಸಿ.ವಿ.ದೇವರಾಜ್ ರವರು ತಿಳಿಸಿದರೆ.

ಕಿರಿಯ ವಯಸ್ಸಿನ ಸಾಮಾಜಿಕ ಸೇವೆ

ಕಿರಿಯ ವಯಸ್ಸಿನ ಸಾಮಾಜಿಕ ಸೇವೆಗಾಗಿ ವಿಜಯ ಸಂಜೆ ಕಾಲೇಜಿನಲ್ಲಿ ನಂದಿ ಜೆ ಹೂವಿನಹೊಳೆ ಅವರನ್ನು  ಸನ್ಮಾನಿಸಲಾಯಿತು, ನಮ್ಮ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಹರೀಶ್ ರವರಿಂದ

ಕಾಲೇಜು ವಾರ್ಷಿಕೋತ್ಸವ 2012

ವಿಜಯ ಸಂಜೆ ಕಾಲೇಜು ,ಬೆಂಗಳೂರು-ಕಾಲೇಜು ವಾರ್ಷಿಕೋತ್ಸವ 2012
ದಿ:21-03-2012 ರಂದು ವಿಜಯ ಸಂಜೆ ಕಾಲೇಜು ಸಭಾಂಗಣ,ಬಸವನಗುಡಿ,ಬೆಂಗಳೂರು
ದಿ:22-03-2012 ರಂದು ವಿಜಯ ಕಾಲೇಜು-ಬಿ.ವಿ.ಏನ್.ಸಭಾಂಗಣ.ಜಯನಗರ,
ಬೆಂಗಳೂರು
(22 ರಂದು )ವಿಶೇಷ ಸನ್ಮಾನ ಕಾಲೇಜಿನ ಬಿಕಾಂ ವಿಧ್ಯಾರ್ಥಿ ಶ್ರೀ ನಂದಿ ಜೆ ಹೂವಿನಹೊಳೆ ರವರಿಗೆ
(ಕಿರಿಯ ವಯಸಿನ ಸಾಮಾಜಿಕ ಸೇವೆಗಾಗಿ )
 
Vijaya evening college, Bangalore - College Anniversary 2012
on:21-03-2012, at vijaya evening college Hall, Basavanagudi, Bangalore
on :22-03-2012 Special honored to the college Bcom student Sri Nandi J hoovinahole(for his social services) at BVN hall,vijaya college,jayanagar,bengaluru
ಸಮಸ್ತ ಕನ್ನಡ ಮನಸ್ಸುಗಳಿಗೆ ಕನ್ನಡ ರಾಜೋತ್ಸವದ ಶಭಾಶಯಗಳು
ನಮ್ಮ ನಿಮ್ಮ  ಹೆಮ್ಮೆಯ ಕನ್ನಡ ಜಿಲ್ಲಾ ಮಾಹಿತಿ ಜಾಲತಾಣ
 '' ಚಿತ್ತಾರದುರ್ಗ.ಕಾಂ '' ೫ನೇ ವಸಂತದತ್ತ
              (೧-೧೧-೧೧ ರಂದು ೫ನೇ ವಾರ್ಷಿಕೋತ್ಸವ ದ ಸಂಭ್ರಮದಲ್ಲಿ ''ಚಿತ್ತಾರದುರ್ಗ.ಕಾಂ ' ')


ಗೌರಿ ಗಣೇಶ ಹಾಗೂ ರಂಜಾನ್ ಹಬ್ಬದ ಶುಭಾಶಯಗಳು


ಗೌರಿ ಗಣೇಶ ಹಾಗೂ ರಂಜಾನ್ ಹಬ್ಬದ ಶುಭಾಶಯಗಳು
ಶುಭಾಕೊರುವವರು:ನಂದಿ ಜೆ ಹೂವಿನಹೊಳೆ

ದೊಡ್ಡಮನಿ ಎಂ ಮಂಜುನಾಥ್ ರವರ “ಮಂಜು ಕರಗುವ ಮುನ್ನ” ಎಂಬ ಕೃತಿ ಭಾನುವಾರ ಲೋಕಾರ್ಪಣೆ


ಬೆಂಗಳೂರು : ದೊಡ್ಡಮನಿ ಎಂ ಮಂಜುನಾಥ್ ರವರ “ಮಂಜು ಕರಗುವ ಮುನ್ನ” ಎಂಬ ಕೃತಿಯು ದಿನಾಂಕ : 21.08.೨೦೧೧ ನೇ ಭಾನುವಾರ ಬೆಳಗ್ಗೆ 10:೩೦ ಕ್ಕೆ ಸರಿಯಾಗಿ ಕನ್ನಡ ಸಾಹಿತ್ಯ ಪರಿಷತ್, ಚಾಮರಾಜಪೇಟೆ, ಬೆಂಗಳೂರಿನಲ್ಲಿ ಲೋಕಾರ್ಪಣೆಯಾಗಲಿದೆ.
ಮಂಜು, ದೊಡ್ಡಮನಿ.
ಸಮಾರಂಭದಲ್ಲಿ ಖ್ಯಾತ ಕತೆಗಾರರಾದ ಶ್ರೀ ಕುಂ. ವಿರಭದ್ರಪ್ಪ, ಖ್ಯಾತ ಸಾಹಿತಿ, ವಿಜ್ಞಾನಿ ಶ್ರೀ ರಮೇಶ್ ಕಾಮತ್, ಖ್ಯಾತ ಕವಿ ಹಾಗೂ ಸಿನಿಮಾ ಸಾಹಿತಿ ಶ್ರೀ ಹೃದಯ ಶಿವ,  ಕವಿ ಹಾಗೂ ಕುವೈತ್ ಕನ್ನಡಿಗರಾದ ಡಾ. ಆಜಾದ್ ಐ.ಎಸ್ ಮೊದಲಾದ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್ ನೊಂದಿಗೆ ಮಾತನಾಡಿದ ದೊಡ್ಡಮನಿ ಎಂ ಮಂಜುನಾಥ್ ರವರು ತುಂಬಾ ದಿನಗಳ ನನ್ನ ಕನಸು ಇದೀಗ ನೆರವೇರುತ್ತಿದೆ ಎಂದೋ ಹೊರಬರ ಬೇಕಿದ್ದ ನನ್ನ ಕವನ ಸಂಕಲನದ ಪುಸ್ತಕ ಈಗ ಲೋಕಾರ್ಪಣೆಗೆ ಸಿದ್ಧವಾಗಿದೆ ತಡವಾಗಲು ಕಾರಣ ನನ್ನ ಮೊಂಡತ. ನನ್ನ ಕಲ್ಪನೆಗೆ ತಕ್ಕ ಹಾಗೆ ಪುಸ್ತಕವನ್ನ ಹೊರತರಬೇಕು ಪುಸ್ತಕದಲ್ಲಿ ಹೊಸತನ ತುಂಬಬೇಕು ಅನ್ನೋ ಹಠದಲ್ಲಿ ನಾನು ಇಷ್ಟು ದಿನ ನನ್ನ ಕನಸನ್ನ ನನ್ನಲ್ಲಿ ಇಟ್ಟು ಕಾಪಾಡಿದೆ ಕೊನೆಗೆ ಎಲ್ಲಾ ನನ್ನ ಕನಸುಗಳು ಮಂಜಿನಂತೆ ಕರಗುವ ಮುನ್ನ ಕೆ.ಗಣೇಶ್ ಕೋಡೂರು” ಹಾಗೂ “ಬೆನಕ ಬುಕ್ ಬ್ಯಾಂಕ್”ನ ಬಳಗ ಮುಂದೆ ಬಂದು ನನ್ನ ಕಲ್ಪನೆಗಳಿಗೆ ಸ್ಪಂದಿಸಿ ಇಂದು “ಮಂಜು ಕರಗುವ ಮುನ್ನ” ಅನ್ನೋ ಹೆಸರಿನಡಿ ಕನ್ನಡ ಸಾಹಿತ್ಯ ಲೋಕದ ಇತಿಹಾಸದಲ್ಲೇ ವಿನೂತನ (ನನಗೆ ತಿಳಿದ ಮಟ್ಟಿಗೆ) ಅನಿಸೋ ಪುಸ್ತಕವನ್ನ ಲೋಕಾರ್ಪಣೆ ಮಾಡಲು ಸಹಕರಿಸಿದ್ದಾರೆ. ಹಾಗೆಯೇ ನಮ್ಮ ನಿಮ್ಮೆಲ್ಲರ ಬ್ಲಾಗ್ ಲೋಕದ ವಿಜ್ಞಾನಿ ಜ್ಞಾನಿ ಡಾಕ್ಟರ್ ಅಜಾದ್ ಅವರು ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ ಅಲ್ಲದೇ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರ ಪಾತ್ರ ಅಪಾರ ಅವರಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು ಹಾಗೆ ಖ್ಯಾತ ಕವಿ ಮತ್ತು ಸಿನಿಮಾ ಸಾಹಿತಿ ಹೃದಯ ಶಿವ ಅವರು ಬೆನ್ನುಡಿ ಬರೆದು ಈ ಪುಸ್ತಕವನ್ನು ಲೋಕಾರ್ಪಣೆ ಮಾಡುತ್ತಿದ್ದಾರೆ.

ದೊಡ್ಡಮನಿ ಎಂ ಮಂಜುನಾಥ್ ರವರ ಕವನ ಸಂಕಲನ “ಮಂಜು ಕರಗುವ ಮುನ್ನ” ಮತ್ತು ರೂಪ ಎಲ್ ರಾವ್ ಅವರ “ಪ್ರೀತಿ..! ಏನೆನ್ನಲ್ಲಿ ನಿನ್ನಾ..?” ಅಲ್ಲದೆ ಸುಧೇಶ್ ಶೆಟ್ಟಿ ಅವರ “ಹೆಜ್ಜೆ ಮೂಡದ ಹಾದಿ” ಪುಸ್ತಕಗಳು ಏಕಕಾಲದಲ್ಲಿ ಲೋಕಾರ್ಪಣೆ ಹೊಂದಲಿವೆ ತಾವೆಲ್ಲರೂ ಬಂದು ಕಾರ್ಯಕ್ರಮವನ್ನು ಯಶಸ್ವೀ ಆಗಿ ನಡೆಸಿ ಕೊಟ್ಟು, ಈ ಕವನ ಸಂಕಲನವನ್ನು ಎಂದಿನಂತೆ ಸ್ವಾಗತಿಸಿ ಹರಸಿ ಹಾರೈಸಿ ಆಶೀರ್ವದಿಸಿ ಪ್ರೋತ್ಸಹಿಸಬೇಕೆಂದು ತಿಳಿಸಿದ್ದಾರೆ.

ಸದ್ದುಗದ್ದಲವಿರದೆ ಗದ್ದುಗೆಗೇರಿದ ಸಾಧನೆ





ಸದ್ದುಗದ್ದಲವಿರದ ಸಾಧನೆ ಇಲ್ಲಿ ಗದ್ದುಗೆಯೇರಿದೆ!
ಕಾಯಕವೇ ಕೈಲಾಸವೆನ್ನುವ ಮಾತು ಕೃತಿಯೊಳಗೆ ಮೂಡಿದೆ
ಕಾವಿಯುಡುಗೆಯನುಟ್ಟು ನಭವೇ ಕಿರಣ ಹಸ್ತವ ಚಾಚಿದೆ!
ಎಲ್ಲ ನನ್ನವರೆನುವ ಭಾವದ ಕರುಣೆಯೇ ಕಣ್ತೆರೆದಿದೆ.
-ರಾಷ್ಟ್ರಕವಿ ಡಾ.ಜಿ.ಎಸ್.ಎಸ್.


ಲಿಂಗಾಯತ ಮಠಪರಂಪರೆಯಲ್ಲಿಯೇ ವಿಶಿಷ್ಟವಾದ ದಾಸೋಹದ ಮಠ ಶ್ರೀ ಸಿದ್ಧಗಂಗಾ ಮಠ. ಸಾರ್ಥಕ ೧೦೩ ವರ್ಷ ಕಳೆದಿರುವ ನಡೆದಾಡುವ ದೇವರು ಶ್ರೀ.ಶಿವಕುಮಾರ ಸ್ವಾಮಿಗಳು. ಗುರು ಪರಂಪರೆಯಲ್ಲಿಯೇ ಕಳಸ ಪ್ರಾಯರಾದವರು. ಶ್ರೀಗಳ ಜನನ ಬೆಂಗಳೂರು ಗ್ರಾ.ಜಿಲ್ಲೆ ಮಾಗಡಿ (ತಾ) ವೀರಾಪುರಗ್ರಾಮದಲ್ಲಿ. ತಂದೆ ಪಟೇಲ್ ಹೊನ್ನೇಗೌಡರು. ತಾಯಿ ಗಂಗಮ್ಮ ಜನನ ೧/೪/೧೯೦೮, ಬಾಲ್ಯ ವಿದ್ಯಾಭ್ಯಾಸ, ವೀರಾಪುರ ಮತ್ತು ಪಾಲನಹಳ್ಳಿ ಕೂಲಿಮಠದಲ್ಲಿ. ಎಂಟನೇ ವಯಸ್ಸಿನಲ್ಲಿ ತಾಯಿಯ ವಿಯೋಗ. ೧೩ನೇ ಮಗುವಾಗಿ ಜನಿಸಿದ ಶಿವಣ್ಣನ ಪ್ರಾಥಮಿಕ ವಿದ್ಯಾಭ್ಯಾಸ ನಾಗವಲ್ಲಿಯಲ್ಲಿ. ಹಿರಿಯಕ್ಕ ಪುಟ್ಟ ಹೊನ್ನಮ್ಮನ ಆರೈಕೆಯಲ್ಲಿ ಬೆಳೆದ ಶಿವಣ್ಣ. ೧೯೧೯ರಲ್ಲಿ ಅಂದಿನ ಲೋಯರ್ ಸೆಕೆಂಡರಿ ತೇರ್ಗಡೆಯಾದರು. ೧೯೨೨ರಲ್ಲಿ ತುಮಕೂರು ಸರ್ಕಾರಿ ಪ್ರೌಢಶಾಲೆ ಸೇರಿದರು. ೧೯೨೬ರಲ್ಲಿ ಮೆಟ್ರಿಕ್ ಪಾಸ್ ಮಾಡಿದರು. ಸಿದ್ದಗಂಗೆಯ ಶ್ರೀ ಉದ್ಯಾನ ಶಿವಯೋಗಿಗಳ ದಾಸೋಹ ಕೀರ್ತಿಯಿಂದ ಆಕರ್ಷಿತರಾದರು. ಶ್ರೀ ಉದ್ಧಾನ ಶಿವಯೋಗಿಗಳು ಶಿವಣ್ಣನಿಗೆ ಶ್ರೀಮಠದಲ್ಲಿ ಆಶ್ರಯ ನೀಡಿದರು. ಎಂಟ್ರೆನ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಶಿವಣ್ಣ, ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರು. ತೋಟದಪ್ಪನವರ ಛತ್ರದಲ್ಲಿ ಆಶ್ರಯ ಪಡೆದರು. ಸಿದ್ಧಗಂಗಾಮಠದ ಸಂಸ್ಕೃತಿಯನ್ನು ರೂಢಿಸಿಕೊಂಡಿದ್ದ ಶಿವಣ್ಣ ಕಟ್ಟುನಿಟ್ಟಿನ ವಿದ್ಯಾರ್ಥಿ ಜೀವನ ನಡೆಸಿದರು. ವಿದ್ವಾಂಸರಾದ ಟಿ.ಎಸ್.ವೆಂಕಣ್ಣಯ್ಯ, ಎ.ಆರ್.ಕೃಷ್ಣಶಾಸ್ತ್ರಿಗಳ ಪ್ರಿಯ ಶಿಷ್ಯರೆನಿಸಿದರು. ವಿನಯ, ಸದಾಚಾರ, ಸತ್‌ಕ್ರಿಯಾಚರಣೆಗಳಿಂದ ಎಲ್ಲರ ಗಮನ ಸೆಳೆದರು.
ಆ ವೇಳೆಗೆ ಉದ್ಧಾನ ಶಿವಯೋಗಿಗಳ ಉತ್ತರಾಧಿಕಾರಿಗಳಾಗಿ ನಿಯೋಜಿತರಾಗಿದ್ದ ಮರುಳಾರಾಧ್ಯರು ಶಿವಣ್ಣನ ಆತ್ಮೀಯ ಒಡನಾಡಿಯಾಗಿದ್ದರು. ಪರೀಕ್ಷೆಗೆ ಸಿದ್ಧತೆ ನಡೆಸಿದ್ದಾಗ ೧೯೩೦ರಲ್ಲಿ ಮರುಳಾರಾಧ್ಯರು ಅಕಾಲ ಮರಣಕ್ಕೆ ತುತ್ತಾದರೆಂಬ ಸುದ್ಧಿ ಬಂದಿತು. ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿದ ಶಿವಣ್ಣನತ್ತ ಉದ್ಯಾನ ಶಿವಯೋಗಿಗಳ ಕೃಪಾದೃಷ್ಟಿ ಹರಿಯಿತು. ಸಿದ್ಧಗಂಗಾಮಠದ ಭಕ್ತರ ಅಭಿಲಾಷೆಯೂ ಸೇರಿತು. ಶ್ರೀ ಮಠದ ಜವಾಬ್ದಾರಿಗೆ ಶಿವಣ್ಣ ಒಪ್ಪಿಗೆ ಸೂಚಿಸಿದರು. ಹೆತ್ತ ತಂದೆ ಅಡ್ಡಿ ಬಂದರೂ ಶಿವಣ್ಣ ಜವಾಬ್ದಾರಿಯಿಂದ ವಿಮುಖರಾಗಲಿಲ್ಲ.
ಗೋಸಲ ಸಿದ್ಧೇಶ್ವರರಿಂದ ಹರಿದುಬಂದ ಸಿದ್ಧಗಂಗಾಮಠ ಪರಂಪರೆಯ ಮುಂದುವರಿಕೆಯಾಗಿ ೩-೩-೧೯೯೦ರಂದು ಶಿವಕುಮಾರ ದೇವರು ಪೀಠಾಧಿಕಾರಿಗಳಾಗಿ ನಿಯುಕ್ತರಾದರು. ಶ್ರೀ ಉದ್ಧಾನ ಶಿವಯೋಗಿಗಳವರ ಕಮ್ಮಟದಲ್ಲಿ ರೂಪುಗೊಂಡು ಶ್ರೀ ಶಿವಕುಮಾರ ಸ್ವಾಮಿಗಳಾಗಿ ಶ್ರೀ ಸಿದ್ಧಗಂಗಾಮಠದ ಶಿಕ್ಷಣ ಸಂಸ್ಥೆಗಳ ಮತ್ತು ಶ್ರೀ ಮಠದ ದಾಸೋಹ ವ್ಯವಸ್ಥೆಯ ಜವಾಬ್ದಾರಿಗೆ ಹೆಗಲು ಕೊಟ್ಟರು. ಆಗ ಶ್ರೀ ಮಠಕ್ಕೆ ಅಲ್ಪ ಆದಾಯವಿದ್ದಿತು. ನಡೆದೇ ಭಕ್ತರ ಮನೆಗೆ ಹೋಗಿ ದವಸ ಕಾಣಿಕೆ ತರಬೇಕಾಗಿತ್ತು. ಉತ್ಸಾಹಿ ತರುಣ ಶ್ರೀ ಶಿವಕುಮಾರ ಸ್ವಾಮಿಗಳಿಗೆ ಕೊರಳಲಿ ಕಟ್ಟಿದ ಬೆಂಡು, ಕಾಲಲ್ಲಿ ಕಟ್ಟಿದ ಗುಂಡು, ಎಂಬಂಥ ಪರಿಸ್ಥಿತಿಯಲ್ಲಿ ಅಗ್ನಿದಿವ್ಯವನ್ನು ಧೈರ್ಯದಿಂದ ಎದುರಿಸಿದರು. ಭಕ್ತರ ಅಪಾರ ಪ್ರೀತಿಯನ್ನು ಗೌರವವನ್ನು ಸಂಪಾದಿಸಿದರು. ದಾಸೋಹ ನಿರ್ವಿಘ್ನವಾಗಿ ನಡೆಯುವಂತೆ ಮಾಡಿದರು. ಶ್ರೀ ಮಠದ ಕಾರ್ಯವ್ಯಾಪ್ತಿ ಹೆಚ್ಚಾದಂತೆ ದಾಸೋಹ ವ್ಯವಸ್ಥೆಯೂ ಬೆಳೆಯಿತು.
ಶ್ರೀ ಶಿವಕುಮಾರ ಸ್ವಾಮಿಗಳ ತ್ಯಾಗ ಜೀವನ ಅನುಪಮವಾದದ್ದು. ಮಾತು ಮನಗಳಿಂದತ್ತತ್ತ ಮೀರಿದ ವ್ಯಕ್ತಿತ್ವದ ದಿವ್ಯ ಮೂರುತಿ, ನಿಜವನರಿತ ನಿಶ್ಚಿಂತ, ಮರಣವ ಗೆದ್ದ ಮಹಂತ, ಪರಮವನೊಳಗೊಂಡ ಪರಿಣಾಮಿ. ಶ್ರೀ ಸಿದ್ಧಗಂಗಾಮಠದ ಇತಿಹಾಸದಲ್ಲಿ ಬೆಳಕಿನ ಯುಗವನ್ನು ಪ್ರಾರಂಭಿಸಿದ ನಿರ್ಮಲ ಮೂರ್ತಿ. ಶ್ರೀ ಶಿವಕುಮಾರಸ್ವಾಮಿಗಳದ್ದು ಎತ್ತರದ ನಿಲುವು, ವಿಶಾಲವಾದ ಹಣೆ ಸದಾ ಭಸ್ಮಧಾರಿ, ಪ್ರೀತಿ ಸೂಸುವ ಕಣ್ಣುಗಳು, ಮಾತೃ ಹೃದಯ, ಶುದ್ಧ ಕಾವಿಧಾರಿ, ಸೇವೆಯೇ ಜೀವನದ ಧ್ಯೇಯ, ಗಂಭೀರ ನಡಿಗೆ, ಮಾತು ಮಾಣಿಕ್ಯ, ಇಳಿವಯಸ್ಸಿನಲ್ಲೂ ಪ್ರಖರವಾದ ಶರಣ ಚಿಂತನ, ಅನುಭಾವದ ವಾಣಿಯಿಂದ ಅಭಿನವ ಬಸವಣ್ಣನವರಾಗಿದ್ದಾರೆ. ಸದಾ ಬಾಗಿದ ತಲೆ, ಹಸನ್ಮುಖ, ಎದ್ದು ಕಾಣುವ ಗಂಭೀರ ಮುಖಮುದ್ರೆ ಕಾಯಕ ದಾಸೋಹಗಳೇ ಮೈವೆತ್ತು ಬಂದಂತಿರುವ ಶ್ರೀ ಶಿವಕುಮಾರಸ್ವಾಮಿಗಳ ದರ್ಶನವೇ ಚೇತೋಹಾರಿ. ನಿರ್ಮಲಾಂತಃ ಕರಣವುಳ್ಳ ಶ್ರೀಗಳು, ತಮ್ಮ ಅಪೂರ್ವ ಪ್ರತಿಭೆಯಿಂದ ಬಾಳಿಗೊಂದು ಭರವಸೆ ನೀಡುವ ಆಶಾದೀಪವಾಗಿದ್ದಾರೆ.
ಕರುಣೆಯ ಮೂರ್ತಿಗಳಾಗಿದ್ದ ಶ್ರೀ ಉದ್ಧಾನ ಶಿವಯೋಗಿಗಳು ೧೧-೧-೧೯೪೧ರಂದು ಲಿಂಗದೊಳಗಾದರು. ಭಕ್ತರ ಸಹಕಾರದಿಂದ ಹಿರಿಯ ಶ್ರೀಗಳ ಸ್ಮರಣೆಯನ್ನು ಅದ್ಧೂರಿಯಾಗಿ ನೆರವೇರಿಸಿದರು. ಲಿಂಗಾಯತ ಜನಾಂಗ ವಿದ್ಯೆಯಿಂದ ವಂಚಿತರಾಗಿದ್ದಾರೆ. ವಿದ್ಯಾವಂತರಾದರೆ ಮಾತ್ರ ಸಮಾಜದ ಉದ್ಧಾರ ಸಾಧ್ಯವೆಂಬ ಪೂಜ್ಯ ಉದ್ಧಾನ ಶಿವಯೋಗಿಗಳು ೧೯೧೭ರಲ್ಲಿ ಶ್ರೀ ಸಿದ್ಧಲಿಂಗೇಶ್ವರ ಸಂಸ್ಕೃತ ಪಾಠಶಾಲೆ ಪ್ರಾರಂಭಿಸಿದರು. ಅದು ಮುಂದೆ ಸಂಸ್ಕೃತ ಕಾಲೇಜ್ ಆಗಿ ಇಂದಿಗೂ ನಡೆದುಬಂದಿದೆ. ೧೯೪೪ರಲ್ಲಿ ತುಮಕೂರಿನಲ್ಲಿ ಪ್ರೌಢಶಾಲೆ ಪ್ರಾರಂಭ ಮಾಡಿದರು, ನಂತರ ಗ್ರಾಮೀಣ ಜನರಿಗಾಗಿ ಹಲವಾರು ಗ್ರಾಮಾಂತರ ಶಾಲೆ, ಪ್ರೌಢಶಾಲೆ, ಕಾಲೇಜುಗಳನ್ನು ಸ್ಥಾಪಿಸಿದರು. ಸಾರ್ವಜನಿಕ ಗ್ರಂಥಾಲಯಗಳನ್ನು, ಶ್ರೀ ಸಿದ್ಧಲಿಂಗೇಶ್ವರ ಮುದ್ರಣಾಲಯವನ್ನು, ಸಂಶೋಧನಾ ಕೇಂದ್ರ ಮತ್ತು ಸಿದ್ಧಗಂಗಾ ಮಾಸಪತ್ರಿಕೆಯನ್ನು ೧೯೬೪ರಲ್ಲಿ ಪ್ರಾರಂಭಿಸಿದರು. ೧೯೬೩ರಲ್ಲಿ ಆರಂಭವಾದ ಶ್ರೀ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯ ನಾಡಿನಲ್ಲೇ ಹೆಸರಾಂತ ಎಂಜಿನಿಯರ್‌ಗಳನ್ನು ತಯಾರು ಮಾಡುವ ಕೇಂದ್ರವಾಗಿದೆ.
ಶ್ರೀ ಸಿದ್ಧಗಂಗಾಮಠ ಹೆಸರಿಗೆ ಲಿಂಗಾಯುತ ಮಠ, ದಾಸೋಹ, ವಿದ್ಯಾದಾನಕ್ಕೆ ಜಾತಿ ಎಂದೂ ಅಡ್ಡಿಯಾಗಿಲ್ಲವೆಂಬುದು ಮಾತ್ರ ಸತ್ಯ. ಹಿಂದುಳಿದ ಅನೇಕ ಜಾತಿ, ಪಂಗಡಗಳಿಗೆ ಸೇರಿದ ವಿದ್ಯಾರ್ಥಿಗಳು ಇಲ್ಲಿ ಆಶ್ರಯ ಪಡೆದಿದ್ದಾರೆ. ಲಿಂಗಾಯತರು, ಮರಾಠ, ಕ್ರೈಸ್ತ, ಜೈನ, ವಿಶ್ವಕರ್ಮ, ಬ್ರಾಹ್ಮಣ, ಮೊದಲಿಯರ್, ವೈಶ್ಯರು, ಮುಸ್ಲಿಮರು, ಪರಿಶಿಷ್ಟರು, ಮುಂತಾದ ಎಲ್ಲ ವರ್ಗ ವರ್ಣದ ಎಂಟು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಊಟ, ವಸತಿ, ವಿದ್ಯೆಯನ್ನು ಉಚಿತವಾಗಿ ನೀಡುತ್ತಿರುವ ಸಂಸ್ಥೆಯಾಗಿ ಬೆಳೆದಿದೆ. ಇವರಲ್ಲಿ ಅರ್ಧಭಾಗ, ಅನಾಥಮಕ್ಕಳಿರುವುದು ಇಲ್ಲಿನ ವಿಶೇಷ. ಅಪ್ಪ ಅಮ್ಮ ದೂರ ಮಾಡಿದ ಅನಾಥರಿಗೂ ಪ್ರೀತಿಯ ಕೊರತೆ ಕಂಡುಬಂದಿಲ್ಲ. ಕಿರಿಯ ಸ್ವಾಮಿಗಳಾದ ಶ್ರೀ ಸಿದ್ಧಲಿಂಗಸ್ವಾಮಿಗಳು ಸ್ವತಃ ನೂರಾರು ಅನಾಥ ಮಕ್ಕಳಿಗೆ ಬಿಸಿ ನೀರಿನ ಸ್ನಾನ ಮಾಡಿಸುತ್ತಾರೆಂಬುದನ್ನು ಕೇಳಿದಾಗ ವಿಸ್ಮಯವಾಯಿತು. ಕಾಯಕ ಮತ್ತು ದಾಸೋಹ ತತ್ವಗಳು ನಿಜವಾದ ಅರ್ಥದಲ್ಲಿ ಸಿದ್ಧಗಂಗೆಯಲ್ಲಿ ಸಾಕಾರಗೊಂಡಿದೆ. ಶರಣತತ್ವಗಳನ್ನು ತಮ್ಮ ಬದುಕಿನಲ್ಲಿ ಅಮೂಲ್ಯ ಸಂಪತ್ತನ್ನಾಗಿರಿಸಿಕೊಂಡಿರುವ ಶ್ರೀ ಶಿವಕುಮಾರ ಸ್ವಾಮಿಗಳಿಗೆ ನೂರು ವರ್ಷ ತುಂಬುತ್ತಿರುವಾಗಲೂ ನಿತ್ಯ ಜಂಗಮರಾಗಿ, ಗುರುವಂದನೆಗೆ ಪಾತ್ರರಾಗಿರುವುದು ವಿಶೇಷ. ಕಾಯಕದಲ್ಲಿ ಮೇಲು ಕೀಳೆಂಬುದಿಲ್ಲ ಎಂಬ ಬಸವಣ್ಣನವರ ವಾಣಿಯಂತೆ, ದಿನನಿತ್ಯದ ಬದುಕಿನ ಎಲ್ಲ ಕಾಯಕಗಳೂ ಸಮಾನವೆಂದೂ ಸ್ವತಃ ಆಚರಿಸಿ ತೋರಿಸಿದ್ದಾರೆ.
ಪೂಜ್ಯರ ದಿನಚರಿಯೊಂದು ವಿಸ್ಮಯ, ಬೆಳಗಿನ ಮೂರು ಗಂಟೆಗೆ ಏಳುವ ಸ್ವಾಮಿಗಳು ಶೌಚಾದಿ ನಿತ್ಯಕರ್ಮಗಳ ನಂತರ ಸ್ನಾನ, ಶಿವಪೂಜೆ ಏಕಾಂತ ಧ್ಯಾನ, ಶರಣರ ವಚನಗಳು, ಭಕ್ತಿಗೀತೆಗಳೊಂದಿಗೆ ಮಂಗಳ. ಹತ್ತಾರು ಭಕ್ತರ ನಡುವೆ ಗುರು, ಲಿಂಗ, ಜಂಗಮಾಚಾರಣೆ, ಮಾತು ಮೌನಗಳಿಂದತ್ತತ್ತ ಮೂಕವಾಗುವ ಅನುಭಾವ. ಇಷ್ಟಲಿಂಗಾರ್ಚನೆ ನಂತರ ಪ್ರಸಾದ ಸ್ವೀಕಾರ. ಅನುಭಾವದ ಹಾಡುಗಳನ್ನು ಪೂಜ್ಯರೇ ಹಾಡುತ್ತಾರೆ. ಮಿತ ಆಹಾರ, ಒಂದಿಷ್ಟು ಹಣ್ಣು ಭಕ್ತರೊಂದಿಗೆ ಪ್ರಸಾದ ಸ್ವೀಕರಿಸುವ ಸತ್ವಪರಂಪರೆ. ೫.೩೦ ರಿಂದ ಅಧ್ಯಯನ, ಕೆಲಕಾಲ ನಂತರ ದಿನನಿತ್ಯ ಕಾಯಕದತ್ತ ಗಮನ ಮುಂಜಾನೆಯ ಪ್ರಾರ್ಥನಾ ಸಭೆ ಸುಮಾರು ೪ ರಿಂದ ೫ ಸಾವಿರ ವಿದ್ಯಾರ್ಥಿಗಳ ಸಾಮೂಹಿಕ ಪ್ರಾರ್ಥನೆಯಲ್ಲಿ ನಿತ್ಯ ಪಾಲ್ಗೊಳ್ಳುತ್ತಾರೆ. ಶ್ರೀ ಮಠದ ವಾತಾವರಣದಲ್ಲಿ ವಿದ್ಯುತ್ ಸಂಚಾರ. ೧೦ ನಿಮಿಷಗಳು ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಆಶೀರ್ವಚನ. ಕಾರ್ಯಾಲಯಕ್ಕೆ ಆಗಮನ, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಮಾತುಕತೆ. ಹೊಲಗದ್ದೆಗಳ ಕೆಲಸಗಳ ಮಾಹಿತಿ ಪಡೆದು ಆಗಬೇಕಾದ ಕೆಲಸಗಳ ನಿರ್ದೇಶನ, ಕಟ್ಟಡ ನಿರ್ಮಾಣಗಳ ಪರಿಶೀಲನೆ, ಪತ್ರಗಳ ಪರಿಶೀಲನೆ, ಅವುಗಳಿಗೆ ಉತ್ತರ ಬರೆಸುವುದು, ಹೊರಗಿನಿಂದ ಬಂದ ಹರಗುರುಚರ ಮೂರ್ತಿಗಳೊಂದಿಗೆ ಧಾರ್ಮಿಕ, ಆಧ್ಯಾತ್ಮಿಕ ಚಿಂತನೆ. ಶಾಸಕರು, ಸಚಿವರೊಂದಿಗೆ ರಾಜ್ಯ, ರಾಷ್ಟ್ರ ರಾಜಕಾರಣದ ಆಗುಹೋಗುಗಳ ಪರಾಮರ್ಶೆ. ಹಿತೋಪದೇಶ.
ಶ್ರೀ ಸಿದ್ಧಗಂಗಾ ಮಠದಲ್ಲಿ ಪೂಜ್ಯರೇ ಜೀವಕಳೆ. ಭಕ್ತರು ಮಠಕ್ಕೆ ಬಂದರೆ ಪೂಜ್ಯರಿಗೆ ತುಂಬಿದ ಸಂತೋಷ. ಸ್ವಾಮೀಜಿಗಳ ದರ್ಶನ ಭಕ್ತರಿಗೆ ಅವರ್ಣನೀಯ ಆನಂದ. ತಮ್ಮ ಕಷ್ಟ ಸುಖಗಳ ನಿವೇದನೆ. ಪೂಜ್ಯರಿಂದ ಭಕ್ತರಿಗೆ ಸಾಂತ್ವಾನ, ಸಮಸ್ಯೆಗಳ ಪರಿಹಾರದಲ್ಲಿ ಪೂಜ್ಯರಿಗೆ ಆಸಕ್ತಿ ಮತ್ತು ತೃಪ್ತಿ. ಶಿವಕುಮಾರ ಸ್ವಾಮಿಗಳ ದರ್ಶನ ಭಾಗ್ಯದಿಂದ ಭಕ್ತರಿಗೆ ನೆಮ್ಮದಿ. ಮಠಕ್ಕೆ ಆಗಮಿಸುವ ಭಕ್ತರಿಗೆ ಪ್ರಸಾದ ಸ್ವೀಕರಿಸಿ ಎಂಬ ಪೂಜ್ಯರವಾಣಿ, ಪ್ರಸಾದ ಸ್ವೀಕರಿಸುವುದರಿಂದ ಧನ್ಯತೆಯ ಭಾವ. ಪ್ರಸಾದ ಮಂದಿರದ ಉಸ್ತುವಾರಿಯೂ ಪೂಜ್ಯರದೆ. ಶರಣ ಸಂಸ್ಕೃತಿ ಮತ್ತು ದಾಸೋಹ ಸಂಸ್ಕೃತಿಯ ಪ್ರತ್ಯಕ್ಷ ರೂಪ ಸಿದ್ಧಗಂಗಾಮಠ. ಸರ್ವಸಮಾನತೆ, ಎನಗಿಂತ ಕಿರಿಯರಿಲ್ಲ ಎಂಬ ವಿನಮ್ರ ಭಾವ.
ಸಿದ್ಧಗಂಗಾ ಮಠದ ಸ್ವಾಮಿಗಳ ಜೀವನವೇ ಒಂದು ಆದರ್ಶ. ಪೂಜ್ಯರು ಶ್ರೀಮಠವನ್ನು ಅಭಿವೃದ್ಧಿ ಪಡಿಸಿದ ರೀತಿ, ಅದನ್ನು ನಡೆಸಿಕೊಂಡು ಬರುತ್ತಿರುವ ರೀತಿ ಅನನ್ಯವಾದದ್ದು. ಜಾತಿಮತವನ್ನು ಲೆಕ್ಕಿಸದೆ ೭೧ ವರ್ಷಗಳಿಂದ ಮಠವನ್ನು ಪ್ರಗತಿಯತ್ತ ಮುನ್ನಡೆಸುತ್ತಿರುವುದು, ಎಂಥವರಲ್ಲೂ ಅಭಿಮಾನ, ಗೌರವ ಮೂಡಿಸುತ್ತದೆ. ಬಡ ಮಕ್ಕಳಿಗೆ ಉಚಿತ ಶಿಕ್ಷಣ, ದಾಸೋಹ ನೀಡುತ್ತಿರುವ ಶ್ರೀ ಶಿವಕುಮಾರ ಸ್ವಾಮಿಗಳ ಸಾಧನೆ ಸಾಮಾನ್ಯದ್ದಲ್ಲ. ರಾಜ್ಯದ ಹೊರರಾಜ್ಯದ ಎಲ್ಲ ಮಠಾಧೀಶ್ವರರೊಂದಿಗೆ, ಅನ್ಯಧರ್ಮದ ಧರ್ಮಾಧಿಕಾರಿಗಳೊಂದಿಗೆ ಸೌಹಾರ್ದ ಸಂಬಂಧ ಇಟ್ಟುಕೊಂಡಿದ್ದಾರೆ. ಶ್ರೀಗಳ ಆಹ್ವಾನದ ಮೇರೆಗೆ ರಾಜ್ಯದ ಎಲ್ಲ ಮುಖ್ಯಮಂತ್ರಿಗಳು ರಾಜ್ಯಪಾಲರು ಮಾತ್ರವಲ್ಲ ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳೂ ಸಿದ್ಧಗಂಗಾ ಮಠಕ್ಕೆ ಬಂದಿದ್ದಾರೆ. ಶ್ರೀ ಮಠದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆಂದರೆ ಅತಿಶಯೋಕ್ತಿ ಏನಲ್ಲ.
ಬೆಂಗಳೂರು-ತುಮಕೂರು ರಸ್ತೆಯಲ್ಲಿ ಬೆಂಗಳೂರಿನಿಂದ ೬೫ ಕಿ.ಮೀ. ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿಯ ಬಲಭಾಗದಲ್ಲಿ, ರೈಲುದಾರಿ ದಾಟಿ ಸುಮಾರು ೧/೨ ಕಿ.ಮೀ. ದೂರದಲ್ಲಿ ಸಿದ್ಧಗಂಗೆ ಬೆಟ್ಟದ ತಡಿಯಲ್ಲಿದೆ. ಇತಿಹಾಸ ಪ್ರಸಿದ್ಧ ಶ್ರೀ ಸಿದ್ಧಗಂಗಾ ಮಠ. ಪ್ರಕೃತಿ ಸೌಂದರ್ಯದ ಮ್ಯೆ, ಗಟ್ಟಿ ಕಣಶಿಲೆಯ ಬೆಟ್ಟದ ಮೇಲೆ ಪವಿತ್ರವಾದ ಸಿದ್ಧಗಂಗೆ ಕೊಳವಿದೆ. ವರ್ಷದುದ್ದಕ್ಕೂ ಶಿಲೆಯ ಮಧೆ ಹರಿದು ಬರುವ ಶೀತಲ ಜಲ, ಕೊಳದಲ್ಲಿ ಪೂಜೆಗೊಳ್ಳುತ್ತಿದೆ. ಬೃಹದಾಕಾರದ ಬಂಡೆಗಳ ಮಧ್ಯೆ ಕ್ಷೇತ್ರದ ದೇಗುಲವೂ ಇದೆ. ಸುಮಾರು ೭೦೦ ವರ್ಷಗಳ ಹಿಂದೆ ಗೋಸಲ ಸಿದ್ದೇಶ್ವರರು ಶ್ರೀಮಠ ಸ್ಥಾಪಿಸಿದರೆಂದು ತಿಳಿದುಬರುತ್ತದೆ. ನೂರೊಂದು ವಿರಕ್ತರೊಂದಿಗೆ ಶಿವಗಂಗೆ ಮತ್ತು ಸಿದ್ಧಗಂಗೆ ಕ್ಷೇತ್ರಗಳಲ್ಲಿ ಮಠ ಸ್ಥಾಪಿಸಿದರೆಂಬ ಉಲ್ಲೇಖಗಳಿವೆ. ಈ ಪರಂಪರೆ ಮುಂದುವರಿದು ಬಂದಿದೆ. ಬೆಟ್ಟದ ಮೇಲಿರುವ ಕಲ್ಲಿನ ಬೃಹತ್ ಬಂಡೆಗಳ ಮಧ್ಯದ ಗಂಗಾಮಾತೆ, ಶ್ರೀ ಸಿದ್ಧಲಿಂಗೇಶ್ವರ ಪೂಜಾ ಮಂದಿರಗಳು ಬೆಟ್ಟದ ಆರಂಭದಲ್ಲಿ ಹಳೆಮಠ, ಉದ್ಧಾನ ಶಿವಯೋಗಿಗಳ ಗದ್ದುಗೆ ಬೆಟ್ಟಕ್ಕೆ ಹೋಗುವ ವಿಶಾಲವಾದ ಪಾವಟಿಗಳು ಮಾರ್ಗಮಧ್ಯದಲ್ಲಿ ಪುಷ್ಕರಣಿ, ಅಡಿಗೆ ಕೋಣೆಯಲ್ಲಿ ದೊಡ್ಡ ಗಾತ್ರದ ಅಡುಗೆ ಪಾತ್ರೆ, ಕೊಳಗಗಳು, ಮುಪ್ಪಿನ ಸ್ವಾಮಿಗಳ ಗದ್ದುಗೆ, ಮಹಾನವಮಿ ಮಂಟಪ, ಶ್ರೀ ಮರುಳಾರಾಧ್ಯರ ಗದ್ದುಗೆ, ಗೋಶಾಲೆ, ಪೂಜ್ಯರ ಕಾರ್ಯಾಲಯ, ದರ್ಶನ ಕೊಠಡಿ, ಪವಿತ್ರ ಮಂಚ, ಶ್ರೀ ಅಡವಿ ಸ್ವಾಮಿಗಳ ಗದ್ದುಗೆ, ಸಿದ್ಧಗಂಗಾ ಹಳೆ ವಿದ್ಯಾರ್ಥಿಗಳ ಸಂಘದ ಕಾರ್ಯಾಲಯ, ಮುದ್ರಣಾಲಯ, ಅಕ್ಕಿಗಿರಣಿ, ಅಂಧರ ಪಾಠಶಾಲೆ, ವೇದಪಾಠಶಾಲೆ, ಕಲ್ಯಾಣ ಮಂಟಪ, ವಸತಿ ಗೃಹಗಳು, ತರಬೇತಿ ಸಂಸ್ಥೆಗಳು ವಸ್ತು ಪ್ರದರ್ಶನದ ವಿಶಾಲ ಆವರಣ, ಸುತ್ತ ತೆಂಗಿನ ತೋಟಗಳು, ಭಕ್ತರ ಮನಸ್ಸಿಗೆ ತಂಪನ್ನೀಯುತ್ತವೆ.
ಈಗ ಲಭ್ಯವಿರುವ ದಾಖಲೆಗಳ ಪ್ರಕಾರ ಶ್ರೀ ನಂಜುಂಡಸ್ವಾಮಿಗಳು (೧೭೮೪-೧೮೨೦) ರುದ್ರಸ್ವಾಮಿಗಳು (೧೮೨೦-೧೮೫೩) ಸಿದ್ಧಲಿಂಗ ಸ್ವಾಮಿಗಳು (೧೮೫೩-೧೯೦೧) ಈ ಅವಧಿಯಲ್ಲಿ ಉತ್ತರ ಕರ್ನಾಟಕದ ಮುಪ್ಪಿನ ಸ್ವಾಮಿಗಳು, ಅಟವೀ ಸ್ವಾಮಿಗಳು ಸಿದ್ಧಗಂಗಾ ಕ್ಷೇತ್ರದಲ್ಲಿ ಸಿದ್ಧಗಂಗಾ ಕ್ಷೇತ್ರದಲ್ಲಿ ನೆಲೆನಿಂತು, ದಾಸೋಹಾದಿ ಧಾರ್ಮಿಕ ಸೇವಾ ಕಾರ್ಯಗಳಿಗೆ ಚಾಲನೆ ನೀಡಿದರೆಂದು ತಿಳಿದುಬರುತ್ತದೆ. ೧೯೦೧ರ ನಂತರ ಪಟ್ಟಕ್ಕೆ ಬಂದ ಉದ್ಧಾನ ಶಿವಯೋಗಿಗಳವರು, ಲೋಕ ಕಲ್ಯಾಣ ಪರವಾದ ಸೇವಾಕಾರ್ಯಗಳನ್ನು ಮುಂದುವರಿಸಿದರು. ಶ್ರೀ ಕ್ಷೇತ್ರದಲ್ಲಿ ಸಿದ್ಧಲಿಂಗೇಶ್ವರ ಜಾತ್ರೆಯನ್ನು ೧೯೦೯-೧೦ರಲ್ಲಿ ಪ್ರಾರಂಭಿಸಿ, ಧಾರ್ಮಿಕ, ಸಾಂಸ್ಕೃತಿಕ ಮತ್ತು ಜನಪದರಿಗೆ ಪ್ರೋತ್ಸಾಹ ನೀಡಿದರು. ಅನ್ನದಾಸೋಹದೊಂದಿಗೆ ಜ್ಞಾನದಾಸೋಹಕ್ಕೆ ಆದ್ಯತೆ ನೀಡಿದರು. ಶ್ರೀ ಮಠದ ಸಂಸ್ಕೃತ ಪಾಠಶಾಲೆಯಲ್ಲಿ ಎಲ್ಲ ಜಾತಿ, ವರ್ಗದ ಜನರಿಗೂ ಸಂಸ್ಕೃತ ಅಧ್ಯಯನಕ್ಕೆ ಅವಕಾಶ ಕಲ್ಪಿಸಿದರು. ೧೦ ದಿನಗಳ ಪರ್ಯಂತ ನಡೆಯುವ ಸಿದ್ಧಗಂಗಾ ಜಾತ್ರೆ ಹಳೆ ಮೈಸೂರಿನ ಉದ್ದಗಲಕ್ಕೂ ಪ್ರಸಿದ್ಧವಾಗಿದೆ.
ಕಾಯಕ
ಭಾರತೀಯ ಸಂಸ್ಕೃತಿಯ ಜೀವಾಳವಾದ ಶರಣ ಸಂಸ್ಕೃತಿಯನ್ನು ಸ್ವತಃ ತಮ್ಮ ನಡೆ ನುಡಿ ಚಿಂತನೆಗಳಲ್ಲಿ ಅಳವಡಿಸಿಕೊಂಡಿರುವ ಶ್ರೀ ಶಿವಕುಮಾರಸ್ವಾಮಿಗಳು, ಶಿಸ್ತು, ಸಂಯಮ, ಕಾಯಕ, ಸದ್ಭಾವನೆ, ಸಮತಾಭಾವಗಳನ್ನು ವಿದ್ಯಾರ್ಥಿಗಳಲ್ಲಿ ತುಂಬಿ ಅವರನ್ನು ಸತ್ಪ್ರಜೆಗಳನ್ನಾಗಿ ರೂಪಿಸುವ ಮಹಾಮಣಿಹದಲ್ಲಿ ತೊಡಗಿದ್ದಾರೆ. ಶ್ರೀಗಳ ಪ್ರಕಾರ, ಮಠವೆಂದರೆ ಕಲ್ಲಿನ ಕಟ್ಟಡಗಳಲ್ಲ, ಆಡಂಬರದ, ವೈಭವದ ಜೀವನಕ್ರಮವಲ್ಲ, ಬೆಳ್ಳಿ ಸಿಂಹಾಸನ, ಬೆಳ್ಳಿ ಪಲ್ಲಕ್ಕಿಗಳಲ್ಲ ಸರಳವಾದ ಜೀವನ ನಡೆಸುತ್ತಾ ಶರಣ ತತ್ವ ಪ್ರಸಾರ ಮತ್ತು ಶರಣರ ಬದುಕು ಬಾಳುವುದು. ಮಠದಿಂದ ಘಟವಲ್ಲ, ಘಟದಿಂದ ಮಠ ಎನ್ನುವ ಮಾತಿಗೆ ಪ್ರತ್ಯಕ್ಷ ಸಾಕ್ಷಿ ಶ್ರೀ ಶಿವಕುಮಾರ ಸ್ವಾಮಿಗಳು. ನಿಶ್ಚಿತ ಜ್ಞಾನ, ಉಜ್ವಲ ವೈರಾಗ್ಯ, ನಿರ್ಮಲ ಕ್ರಿಯೆ ಮುಪ್ಪರಿಗೊಂಡಿರುವ ಸರ್ವಾಂಗಲಿಂಗಿ ಶ್ರೀ ಶಿವಕುಮಾರ ಸ್ವಾಮೀಗಳು ೧೦೪ನೇ ವರ್ಷಕ್ಕೆ ಕಾಲಿಟ್ಟಿರುವುದು ನಾಡಿನ, ರಾಷ್ಟ್ರದ ಪುಣ್ಯ ಮತ್ತು ಹೆಮ್ಮೆ. ಸಕಲ ಜೀವರಾಶಿಗಳನ್ನು ಪ್ರೀತಿಸುವ, ಭಕ್ತರ ಕುರಿತು ಅಪಾರ ಅನುಕಂಪ ಹೊಂದಿರುವ ಶ್ರೀಗಳವರು ಪಂಡಿತ, ಪಾಮರರಿಬ್ಬರೂ ಏಕಪ್ರಕಾರವಾಗಿ ಮೆಚ್ಚುವ ಅಪೂರ್ವ ವಾಗ್ಮಿಗಳು. ವೈಜ್ಞಾನಿಕ ದೃಷ್ಠಿ, ಆಧ್ಯಾತ್ಮಿಕ ಔನ್ನತ್ಯ, ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆ, ಸಾಹಿತ್ಯ, ಸಂಸ್ಕೃತಿ, ಕಲೆಗಳ ಪೋಷಕರಾಗಿ ಶ್ರೀ ಶಿವಕುಮಾರ ಸ್ವಾಮಿಗಳು ಪ್ರಸಿದ್ಧರಾಗಿದ್ದಾರೆ. ಶ್ರೀಗಳ ಸಂಘಟನಾ ಶಕ್ತಿ, ವಿಷಯ ಪರಿಣತಿ ಕುಶಲತೆ, ಇಳಿವಯಸ್ಸಿನಲ್ಲೂ ಪ್ರಖರವಾಗಿಸಿರುವ ವಿಚಾರಶಕ್ತಿ ಅನನ್ಯವಾದವು. ಪ್ರತಿದಿವೂ, ಶ್ರೀಮಠಕ್ಕೆ ಬರುವ ಸಹಸ್ರಾರು ಭಕ್ತರ ದುಃಖ ದುಮ್ಮಾನಗಳನ್ನು ಕೇಳಿ ಸೂಚಿಸಿದ ಪರಿಹಾರಗಳು ವ್ಯಾಜ್ಯಗಳ ತೀರ್ಮಾನಗಳು ಸರ್ವಮಾನ್ಯವಾಗಿದೆ. ದಾಸೋಹ, ವಿದ್ಯಾರ್ಥಿನಿಲಯ, ನೂರಾರು ಶಾಲಾಕಾಲೇಜುಗಳ ಆಡಳಿತ ಜಟಿಲ ಸಮಸ್ಯೆಗಳನ್ನು ಲೀಲಾ ಜಾಲವಾಗಿ ಬಗೆಹರಿಸುವ ಶ್ರೀಗಳು ಸದಾ ಸಮಚಿತ್ತವನ್ನು ಕಾಪಾಡಿಕೊಂಡು ಎಲ್ಲರ ಆದರ ಗೌರವಗಳಿಗೆ ಪಾತ್ರರಾಗಿದ್ದಾರೆ.
ದಿನನಿತ್ಯದ ಪೂಜೆಗಳಲ್ಲದೆ, ಜಾತ್ರಾ ಸಮಯದಲ್ಲಿ ಗೋಸಲ ಸಿದ್ಧೇಶ್ವರ ಉತ್ಸವ, ಪಾರಂಪರಿಕ ಉತ್ಸವಗಳು. ಮಹಾ ರಥೋತ್ಸವ ರುದ್ರಾಕ್ಷಿ ಮಂಟಪ ಪೂಜೆ, ಶಿವಾನುಭವ ಸಮ್ಮೇಳನ, ತೆಪ್ಪೋತ್ಸವಗಳು ನಡೆಯುತ್ತವೆ. ಶರಣ ಸಂದೇಶವನ್ನು ಜನಸಾಮಾನ್ಯರಗೆ ತಲುಪಿಸುವ ಕಾರ್ಯಕ್ರಮಗಳನ್ನು ವರ್ಷದುದ್ದಕ್ಕೂ ನಡೆಯುತ್ತಲೇ ಇರುತ್ತವೆ. ನಾಡಿನ ಹೊರನಾಡಿನ ಖ್ಯಾತ ಮಠಾಧೀಶರನ್ನು ಧರ್ಮಾಧಿಕಾರಗಳನ್ನು ಆಹ್ವಾನಿಸಿ ಅವರ ವಾಣಿಯನ್ನು ಭಕ್ತರಿಗೆ ಕೇಳಿಸುತ್ತಾರೆ. ಶರಣ ಸಂದೇಶವನ್ನು ಉಸಿರಾಗಿಸಿಕೊಂಡಿರುವ ಪೂಜ್ಯರು ತನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬ ಬಸವಣ್ಣನವರ ವಾಣಿಯನ್ನು ಆಚರಣೆಯಲ್ಲಿ ತಂದಿದ್ದಾರೆ. ಶ್ರೀಮಠದ ಭಕ್ತರಲ್ಲಿ ಬಹುಪಾಲು ಕೃಷಿಕರು, ನೀಡುವ ದವಸ ಧಾನ್ಯಗಳಿಂದ ಶ್ರೀಮಠದ ದಾಸೋಹ ನಿರಂತರವಾಗಿ ನಡೆಯುತ್ತಾ ಬಂದಿದೆ. ಇಂತಹ ಕೃಷಿಕರ ಬದುಕಿಗೆ ನೆರವಾಗುವಂತೆ ಜಾತ್ರೆ ಸಂದರ್ಭದಲ್ಲಿ, ಶ್ರೀ ಸಿದ್ಧಲಿಂಗೇಶ್ವರ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನವನ್ನು ೧೫ ದಿನಗಳವರೆಗೆ ಏರ್ಪಡಿಸಿ, ರೈತರಿಗೆ ಉಪಯುಕ್ತವಾದ ಕೃಷಿ ಮಾಹಿತಿಗಳನ್ನು ನೀಡುವ ವ್ಯವಸ್ಥೆಯನ್ನು ಮಾಡಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳು ಮಳಿಗೆ ತೆರೆದು ಇತ್ತೀಚಿಗೆ ಕೃಷಿ ಕ್ಷೇತ್ರದಲ್ಲಿ ಆಗಿರುವ ಹೊಸ ತಳಿ ಬೀಜ, ಗೊಬ್ಬರ, ನೈಸರ್ಗಿಕ ಕೃಷಿ, ನೀರಿನ ಸದ್ಭಳಕೆ, ಕುರಿತು ಕೃಷಿಕರಿಗೆ ಅರಿವು ಮೂಡಿಸುತ್ತಾರೆ. ವಚನ ಗಾಯನ, ಶಾಸ್ತ್ರೀಯ ಸಂಗೀತ, ಜನಪದ ನೃತ್ಯ, ಕಲೆ, ನಾಟಕಗಳನ್ನು ಜಾತ್ರೆಯುದ್ದಕ್ಕೂ ಪ್ರತಿ ದಿನ ಏರ್ಪಡಿಸಿ ಪ್ರೋತ್ಸಾಹಿಸುತ್ತಾರೆ. ಪ್ರತಿ ವರ್ಷ ಮಹಾಶಿವರಾತ್ರಿ ಸಮಯದಲ್ಲಿ ೫೦ ಸಾವಿರಕ್ಕೂ ಹೆಚ್ಚು ಜನರು ಬರುತ್ತಾರೆ. ಎಲ್ಲರಿಗೂ ಪ್ರಸಾದ ವ್ಯವಸ್ಥೆ ಶ್ರೀಮಠದಿಂದ ನಡೆಯುತ್ತದೆ. ೫೦ ರಿಂದ ೬೦ ಸಾವಿರ ದನಗಳು ಸೇರುತ್ತವೆ. ಇವುಗಳಿಗೆ ಮೇವು ನೀರಿನ ವ್ಯವಸ್ಥೆಯನ್ನು ಶ್ರೀಮಠ ಮಾಡುತ್ತದೆ. ಉತ್ತಮ ರಾಸುಗಳಿಗೆ ಪ್ರೋತ್ಸಾಹ ಬಹುಮಾನ ನೀಡಲಾಗುತ್ತದೆ. ಜಾತ್ರೆಗೆ ಬರುವ ದನಕರುಗಳಿಗೆ ವಿಮೆಯನ್ನು ಸಹ ಶ್ರೀ ಮಠದ ವತಿಯಿಂದ ಮಾಡಿಸಿ, ರೈತರಿಗೆ ನೆರವಾಗುತ್ತದೆ. ಇಂತಹ ಜನಸಾಮಾನ್ಯರಿಗೆ, ರೈತರಿಗೆ ಜನಕಲ್ಯಾಣ ಯೋಜನೆಗಳಿಂದ ಯಾತ್ರಾತ್ರಿಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದಾರೆ.
ಶ್ರೀಮಠದ ಹಳೆ ವಿದ್ಯಾರ್ಥಿ ಸಂಘ ಶ್ರೀ ಸಿದ್ಧಗಂಗಾ ಮಠದ ಎಲ್ಲ ಕಾರ್ಯಗಳಲ್ಲಿ ತನು-ಮನ ಧನದಿಂದ ಸೇವೆ ಸಲ್ಲಿಸುತ್ತಿದೆ. ಹಳೆ ವಿದ್ಯಾರ್ಥಿ ಸಂಘದ ಕಾರ್ಯಕಾರಿ ಸಮಿತಿ ಕಾಲಕಾಲಕ್ಕೆ ಆಯ್ಕೆ ಆಗುತ್ತದೆ. ಖರ್ಚು ವೆಚ್ಚ ಲೆಕ್ಕ ಪತ್ರಗಳನ್ನು ಸರ್ವ ಸದಸ್ಯರ ಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆಯುತ್ತದೆ. ಗ್ರಾಮಾಂತರ ಕಲ್ಯಾಣ ಕಾರ್ಯಕ್ರಮಗಳನ್ನು, ಜ್ಞಾನದಾಸೋಹವನ್ನು ನಿರಂತರವಾಗಿ ನಡೆಸುತ್ತಾ ಸಕ್ರಿಯವಾಗಿದೆ. ಸುಸಂಸ್ಕೃತ ಜನಾಂಗ ನಿರ್ಮಾಣಕ್ಕೆ ಶಿಕ್ಷಣವೇ ಮೂಲ, ಶಿಕ್ಷಣವಂತ ಜನಾಂಗ ರಾಷ್ಟ್ರದ ಸಂಪತ್ತು. ಜ್ಞಾನಕ್ಕೆ ಸಮಾನವಾದುದು ಬೇರೆ ಇಲ್ಲ ಎಂದು ಮನಗಂಡಿರುವ ಪೂಜ್ಯಶ್ರೀಗಳು. ಸಿದ್ಧಗಂಗಾ ಕ್ಷೇತ್ರವನ್ನು ಶಿಕ್ಷಣ ಕೇಂದ್ರವನ್ನಾಗಿಸಲು ಸತತವಾಗಿ ಶ್ರಮಿಸುತ್ತಾ ಬಂದಿದ್ದಾರೆ. ಅನಕ್ಷರತೆಯಿಂದ ಹಿಂದುಳಿದ ಬಡಜನರಿಗೆ ಉಚಿತ ಶಿಕ್ಷಣ, ಉಚಿತ ದಾಸೋಹವನ್ನು ನೀಡಿ ದೀನರು, ದಲಿತರು, ಅನಾಥರು, ಹಿಂದುಳಿದ ಜನಾಂಗಗಳ, ಅನಾದರಕ್ಕೆ ಒಳಗಾದ ಶೂದ್ರರಿಗೂ, ಅಸ್ಪೃಶ್ಯರಿಗೂ ವಿದ್ಯೆಗೆ ಮುಕ್ತ ಅವಕಾಶ ಕಲ್ಪಿಸಿ, ರಾಷ್ಟ್ರದ ಗಮನ ಸೆಳೆದಿದೆ.
ಶ್ರೀ ಸಿದ್ಧಗಂಗಾ ಕ್ಷೇತ್ರದಲ್ಲಿ ಪೂರ್ವ ಪ್ರಾಥಮಿಕ ಪಾಠಶಾಲೆ, ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆಗಳು, ಶಿಕ್ಷಕರ ತರಬೇತಿ ಸಂಸ್ಥೆ, ಅಂಧ ಮಕ್ಕಳ ಶಾಲೆ, ಸಂಗೀತ ಪಾಠ ಶಾಲೆ, ವಾಣಿಜ್ಯ ವಿದ್ಯಾಸಂಸ್ಥೆ ಚಿತ್ರಕಲಾ ಶಾಲೆಗಳು ನಡೆಯುತ್ತಿದ್ದು, ಸುಮಾರು ಐದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಚಿತ ಶಿಕ್ಷಣ, ಉಚಿತ ಊಟ, ವಸತಿ, ಬಟ್ಟೆಗಳ ಆಶ್ರಯ ಪಡೆದಿದ್ದಾರೆ. ಇಷ್ಟೊಂದು ಬೃಹತ್ ಸಂಸ್ಥೆಯನ್ನು ಉಚಿತವಾಗಿ ನಡೆಸುವ ಸಂಸ್ಥೆ ರಾಜ್ಯದಲ್ಲಿ ಮಾತ್ರವಲ್ಲ ರಾಷ್ಟ್ರದಲ್ಲೇ ಇದೊಂದೇ ಎನ್ನಬಹುದು. ಇವುಗಳೊಂದಿಗೆ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಹೆಸರಿನಲ್ಲಿ ತುಮಕೂರು ಜಿಲ್ಲೆಯಲ್ಲಿ ಮಾತ್ರವಲ್ಲದೆ ನಾಡಿನ ವಿವಿಧ ಮೂಲೆಗಳಲ್ಲಿ, ಗ್ರಾಮಾಂತರ ಪ್ರದೇಶಗಳಲ್ಲಿ ಪ್ರೌಢಶಾಲೆಗಳನ್ನು, ಪದವಿ ಪೂರ್ವ ಕಾಲೇಜುಗಳನ್ನು, ಪ್ರಥಮ ದರ್ಜೆ ಕಾಲೇಜುಗಳನ್ನು ನಡೆಸುತ್ತಿದೆ. ತುಮಕೂರು ನಗರದಲ್ಲಿ ಶ್ರೀ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯವನ್ನು ೧೯೬೩ರಷ್ಟು ಹಿಂದೆಯೇ ಸ್ಥಾಪಿಸಿ, ನಾಡಿಗೆ ಸಹಸ್ರಾರು ಎಂಜಿನಿಯರುಗಳ ಕೊಡುಗೆ ನೀಡಿದೆ. ರಾಜ್ಯದ ಬಡ ವಿದ್ಯಾರ್ಥಿಗಳಿಗೆ, ಹೊರನಾಡಿನ ವಿದ್ಯಾಕಾಂಕ್ಷಿಗಳಿಗೆ ಅವಕಾಶ ಕಲ್ಪಿಸಿದ ನಾಡಿನಲ್ಲೇ ಹೆಸರಾಂತ ಸಂಸ್ಥೆಯಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಎಲ್ಲ ವರ್ಗ, ವರ್ಣದ ವಿದ್ಯಾರ್ಥಿಗಳು, ಶಿಕ್ಷಕರೂ ಸೇವೆ ಸಲ್ಲಿಸುತ್ತಿದ್ದಾರೆ. ಮಹತ್ಮಾಗಾಂಧಿಯವರ ಕಲ್ಪನೆಯ ಗ್ರಾಮ ರಾಜ್ಯ ಸಮಾಜವಾದ ಇಲ್ಲಿ ಸಾಕಾರಗೊಂಡಿದೆ. ಶ್ರೀ ಸಿದ್ಧಗಂಗಾ ಕ್ಷೇತ್ರದಲ್ಲಿ ಶ್ರೀ ಕ್ಷೇತ್ರದ ಆವರಣ ಸದಾ ಕಾಲ ವಿದ್ಯಾರ್ಥಿಗಳಿಂದ ತುಂಬಿರುತ್ತದೆ. ಎಲ್ಲಿ ನೋಡಿದರೂ ಶಿಕ್ಷಣಾರ್ಥಿಗಳೇ ಕಂಡು ಬರುತ್ತಾರೆ. ಶ್ರೀ ಮಠದ ಪ್ರತಿಯೊಬ್ಬ ವಿದ್ಯಾರ್ಥಿಯೂ ವಾರಕ್ಕೆರಡು ದಿನ ಶ್ರಮದಾನ ಮಾಡಲೇಬೇಕೆಂಬುದು ಕಡ್ಡಾಯ ನಿಯಮ. ಶ್ರಮದಾನದಲ್ಲಿ ಶಿಕ್ಷಕರೂ, ಸಿಬ್ಬಂದಿಗಳೊಂದಿಗೆ ಪೂಜ್ಯರು ಭಾಗವಹಿಸುವುದು ಸಿದ್ಧಗಂಗಾ ಮಠದ ವಿಶೇಷ. ಎಲ್ಲರೂ ಸಮಾನರು ಎಂಬ ತತ್ವದ ಆಚರಣೆ.
ಅನ್ನವನು ಇಕ್ಕುವುದು, ನನ್ನಿಯನು ನುಡಿಯುವುದು, ತನ್ನಂತೆ ಪರರ ಬಗೆವೊಡೆ, ಕೈಲಾಸ ಭಿನ್ನಾಣವನ್ನು ಸರ್ವಜ್ಞ ಎಂಬ ಸರ್ವಜ್ಞನ ವಚನ ಶ್ರೀ ಸಿದ್ಧಗಂಗಾ ಕ್ಷೇತ್ರದಲ್ಲಿ ಸಾಕಾರಗೊಂಡಿದೆ. ದಿನ ನಿತ್ಯ ಸಾವಿರಾರು ಭಕ್ತರು ಶ್ರೀ ಕ್ಷೇತ್ರಕ್ಕೆ ಬರುತ್ತಾರೆ. ಪೂಜ್ಯರನ್ನು ಕಂಡು, ಗದ್ದುಗೆ ದರ್ಶನ ಮಾಡಿ, ದಾಸೋಹದಲ್ಲಿ ಪ್ರಸಾದ ಸ್ವೀಕರಿಸಿ ಧನ್ಯತೆಯ ಭಾವದಿಂದ ಹಿಂದಿರುಗುತ್ತಾರೆ. ಶ್ರೀಮಠದಲ್ಲಿ ಹೊತ್ತಿದ ಒಲೆ ಆರದಿರಲಿ ಎಂಬುದು ಹಿರಿಯ ಸ್ವಾಮಿಗಳ ಆಶಯ. ವಿರಕ್ತ ಪರಂಪರೆಯ ಲಿಂಗಾಯತ ಮಠ ಎಲ್ಲ ಜಾತಿ, ಜನಾಂಗ, ಧರ್ಮದ ಜನರೂ ಒಂದೇ ಕಡೆ ಪ್ರಸಾದ ಸ್ವೀಕರಿಸುವ ಏಕ ಮಾತ್ರ ಪವಿತ್ರ ತಾಣ ಶ್ರೀ ಸಿದ್ಧಗಂಗಾ ಮಠ. ಭಕ್ತರ ಕೊಡುಗೆಯಿಂದಲೇ ಇಷ್ಟೊಂದು ಬೃಹತ್ ದಾಸೋಹ ನಡೆಸುವ ಪೂಜ್ಯರ ಕ್ರಿಯಾಶೀಲತೆಗೆ ಎಂತಹವರೂ ತಲೆಬಾಗಲೇಬೇಕು. ಶ್ರೀಮಠಕ್ಕೆ ನೀಡಿದ ಪ್ರತಿಯೊಂದು ರೂಪಾಯಿ, ದವಸಧಾನ್ಯಗಳು, ದೀನ ದಲಿತರ ಸೇವೆಗೆ, ವಿದ್ಯಾರ್ಥಿಗಳಿಗೆ ಮೀಸಲು. ಆ ಕಾರಣಕ್ಕಾಗಿ ಭಕ್ತರೂ ಆತ್ಮ ಸಂತೋಷದಿಂದ, ತೃಪ್ತಿಯಿಂದ ಶ್ರೀಮಠದ ಸೇವಾ ಕಾರ್ಯಗಳಿಗೆ ಕೊಡುಗೈ ದಾನ ನೀಡುತ್ತಾರೆ. ಇಲ್ಲಿಗೆ ನೀಡುವ ದಾನ, ಕಾಣಿಕೆಗಳು ಸದ್ಬಳಕೆಯಾಗುತ್ತದೆ ಎಂಬುದು ದಾನಿಗಳಿಗೆ ತೃಪ್ತಿ ತಂದಿದೆ. ೧೯೫೪ರಲ್ಲಿ ಆರಂಭಿಸಲಾಯಿತು. ಈ ಪತ್ರಿಕೆಯನ್ನು ೧೯೭೫ರಿಂದ ಮಾಸ ಪತ್ರಿಕೆಯನ್ನಾಗಿ ಪ್ರಕಟಿಸುತ್ತಾ ಬಂದಿದೆ. ಶ್ರೀಮಠ ಸಮಾರಂಭಗಳು, ಕಾರ್ಯಚಟುವಟಿಕೆಗಳ ವರದಿಯೊಂದಿಗಳೊಂದಿಗೆ ಶರಣರ ತತ್ವ, ಸಂದೇಶಗಳನ್ನು ಹಿರಿಯ ವಿದ್ವಾಂಸರಿಂದ ಬರೆಸಿ, ಮೌಲಿಕ ಲೇಖನಗಳನ್ನು ಪ್ರಕಟಿಸುತ್ತಿದೆ. ಸುಮಾರು ಹತ್ತು ಸಾವಿರ ಚಂದಾದಾರರಿರುವ ಧಾರ್ಮಿಕ, ವೈಚಾರಿಕ ಮಾಸಿಕವಾಗಿ ಪ್ರಸಿದ್ಧವಾಗಿದೆ. ಭಕ್ತರ ಆಧ್ಯಾತ್ಮಕ ಹಸಿವನ್ನು ಪೂರೈಸುವ ಪತ್ರಿಕೆಯಾಗಿ ರೂಪುಗೊಂಡಿದೆ.
ಶ್ರೀ ಸಿದ್ಧಗಂಗಾ ಮಠವೊಂದು ಬಸವ ತತ್ವದ ಪ್ರಯೋಗ ಶಾಲೆ. ಶ್ರೀ ಮಠಕ್ಕೆ ಹೆಚ್ಚಿನ ಆಸ್ತಿ ಇಲ್ಲ ಆದಾಯ ಮೂಲವೂ ಇಲ್ಲ. ಭಕ್ತರೇ ಶ್ರೀಮಠದ ಆಸ್ತಿ. ಅವರು ನೀಡುವ ಕಾಣಿಕೆ, ದವಸ-ಧಾನ್ಯಗಳೇ ಆದಾಯ ಮೂಲಗಳು. ಮಹಾಜನರ ಉದಾರ ಕೊಡುಗೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನೀಡುವ ಸಹಾಯ ಧನಗಳೇ ಶ್ರೀ ಸಿದ್ಧಗಂಗಾ ಮಠದ ಸಂಪನ್ಮೂಲಗಳು. ದೀನದಲಿತರ ಸೇವೆಗೆ ಮೀಸಲಾಗಿರುವ ಶ್ರೀ ಮಠದಲ್ಲಿ ಯಾವುದೇ ದುಂದು ವೆಚ್ಚಗಳಿಲ್ಲ. ಆಡಂಬರ, ವೈಭವಗಳಿಗೂ ಸ್ಥಾನವಿಲ್ಲ. ಭಕ್ತರು ನೀಡುವ ಪ್ರತಿ ಪೈಸೆಯೂ ದಾಸೋಹಕ್ಕೆ ಮೀಸಲು. ಬಡ, ಹಿಂದುಳಿದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ, ಸಮಾಜದಲ್ಲಿ ತಲೆ ಎತ್ತಿ ಸ್ವಾವಲಂಬಿಯಾಗಿ ಬಾಳುವ ವಿದ್ಯೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಸಮಾನ ಅವಕಾಶ. ಲೇಖನ, ಭಾಷಣ, ಕವನ ರಚನೆ, ವಾಚನ, ವಚನ ಕಂಠಪಾಠ ಸ್ಪರ್ಧೆಗಳು. ಆಟೋಟ ಸ್ಪರ್ಧೆಗಳನ್ನು ಏರ್ಪಡಿಸುವುದು. ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಅರಳಿಸುವ ಕಾರ್ಯ ನಿರಂತರ. ಈ ದಿಕ್ಕಿನಲ್ಲಿ ಶಿಕ್ಷಕರ, ಸಿಬ್ಬಂದಿಗಳ ವಿದ್ಯಾರ್ಥಿಗಳಿಗೆ ನಾಟಕ ಕಮ್ಮಟ, ಕಲಾಸೇವೆಯಲ್ಲಿ ಪ್ರಕಾರಗಳಲ್ಲಿ ತರಬೇತಿ ನೀಡಿದ್ದಾರೆ.
ಶ್ರೀ ಸಿದ್ಧಲಿಂಗೇಶ್ವರ ನಾಟಕ ಮಂಡಳಿಯ ಜಗಜ್ಯೋತಿ ಬಸವೇಶ್ವರ ನಾಟಕ ೬೦೦ ಕ್ಕೂ ಹೆಚ್ಚು ಪ್ರದರ್ಶನ ನೀಡಿ ಜನ ಮನ್ನಣೆ ಪಡೆದಿದೆ.
ಶ್ರೀ ಮಠದ ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಮತ್ತು ಶ್ರೀ ಸಿದ್ಧಗಂಗಾ ಪ್ರಕಾಶನ ಸಂಸ್ಥೆಗಳ ಮೂಲಕ ನೂರಾರು ಗ್ರಂಥಗಳನ್ನು ಪ್ರಕಟಿಸುತ್ತಾ ಬಂದಿದೆ. ಧಾರ್ಮಿಕ, ಆಧ್ಯಾತ್ಮಕ, ಸಾಮಾಜಿಕ, ಶೈಕ್ಷಣಿಕ ಗ್ರಂಥಗಳ ಜೊತೆಗೆ ಶರಣರ ಜೀವನ, ಶರಣ ಕ್ಷೇತ್ರಗಳ ಪರಿಚಯ ಗ್ರಂಥಗಳನ್ನು ವಚನ ಸಾಹಿತ್ಯ ಕುರಿತ ಮೌಲಿಕ ಗ್ರಂಥಗಳನ್ನು ಪ್ರಕಟಿಸಿದೆ. ಖ್ಯಾತ ಸಾಹಿತಿಗಳಾದ ಶ್ರೀ ತಿಪ್ಪೇರುದ್ರಸ್ವಾಮಿ ಅವರ ಕರ್ತಾರನ ಕಮ್ಮಟ ಬೃಹತ್ ಗ್ರಂಥವನ್ನು ಪ್ರಕಟಿಸಿ, ಸುಲಭ ಬೆಲೆಗೆ ಮಾರಾಟ ಮಾಡಿದೆ. ಈ ಕೃತಿ ಹಲವಾರು ಮುದ್ರಣಗಳನ್ನು ಕಂಡು ಜನಪ್ರಿಯವಾಗಿದೆ. ವಚನ ಗಂಗಾ, ವಚನ ಬಿಲ್ವ, ದಾಸೋಹ ಸಿರಿ ಅಭಿನಂದನ ಗ್ರಂಥ ಪ್ರಕಟಿಸಿದೆ. ಶ್ರೀ ಬಸವೇಶ್ವರರು ಮತ್ತು ಅವರ ಸಮಕಾಲೀನವರು ಎಂಬ ಬೃಹತ್ ಗ್ರಂಥವನ್ನು ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳೆರಡರಲ್ಲೂ ಪ್ರಕಟಿಸಿದೆ. ಕುಸುಮಾಂಜಲಿ, ಕರ್ಮಯೋಗಿ ಸಿದ್ಧರಾಮ, ಉದ್ಧಾನ ಶಿವಯೋಗಿ ಮುಂತಾದ ಗ್ರಂಥಗಳು ಶ್ರೀ ಮಠದಿಂದ ಪ್ರಕಟವಾಗಿದೆ.
೧೯೭೯ರಿಂದಲೂ ಶ್ರೀ ಸಿದ್ಧಗಂಗಾ ಮಠದಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿವರ್ಷ ಬಸವ ಜಯಂತಿ ಉತ್ಸವವನ್ನು ಆಚರಿಸುತ್ತಾ ಬಂದಿದೆ. ಬಸವಣ್ಣನವರ ಭಾವಚಿತ್ರ ಮೆರವಣಿಗೆ, ವಚನೋತ್ಸವ, ವ್ಯಕ್ತಿತ್ವ ವಿಕಸನ, ಉಪನ್ಯಾಸಗಳ ಮೂಲಕ ವಿದ್ಯಾರ್ಥಿಗಳಲ್ಲಿ ಬಸವತತ್ವ ಕುರಿತು ಆಸಕ್ತಿ ಮೂಡಿಸಿ ಸತ್ಪ್ರಜೆಗಳನ್ನಾಗಿ ರೂಪಿಸುತ್ತಿದ್ದಾರೆ. ಶರಣ ತತ್ವ, ವಚನ ಸಾಹಿತ್ಯಕ್ಕಾಗಿ ದುಡಿದ ಮಹನೀಯರನ್ನು ವಿದ್ವಾಂಸರನ್ನು ಶ್ರೀಮಠಕ್ಕೆ ಬರಮಾಡಿಕೊಂಡು ಅವರಿಂದ ಉಪನ್ಯಾಸ ಏರ್ಪಡಿಸಿ, ಸನ್ಮಾನ ಗೌರವ ಪ್ರಶಸ್ತಿಗಳನ್ನು ನೀಡಿದ್ದಾರೆ. ವಚನ ಗಾಯನ ಏರ್ಪಡಿಸಿ ಸಂಗೀತ ಸುಧೆ ಹರಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಬಸವತತ್ವ ಪ್ರಚಾರ, ಕಾಯಕ, ದಾಸೋಹ ಮೂಲಕ ಅಸ್ಪೃಶ್ಯತೆ ನಿವಾರಣೆ, ಮಾನವೀಯತೆ, ವಿಚಾರವಂತಿಕೆಯ ಜಾಗೃತಿ ಮೂಡಿಸುತ್ತಿದ್ದಾರೆ.
ಶ್ರೀ ಸಿದ್ಧಗಂಗಾ ಕ್ಷೇತ್ರ ವರ್ಷದುದ್ದಕ್ಕೂ ಧಾರ್ಮಿಕ, ಶೈಕ್ಷಣಿಕ, ಕ್ರೀಡಾ ಶಿಬಿರಗಳು, ಸಮ್ಮೇಳನಗಳು, ವಿಚಾರ ಸಂಕೀರ್ಣಗಳು ನಡೆಯುತ್ತಲೇ ಇರುತ್ತವೆ. ೧೯೮೯ರಿಂದ ನಿರಂತರವಾಗಿ ಶರಣಮೇಳಗಳನ್ನು ನಡೆಸಿಕೊಂಡು ಬಂದಿವೆ. ಪ್ರತಿವರ್ಷ ಸಂಕ್ರಾಂತಿಯಿಂದ ಉದ್ಧಾನ ಶಿವಯೋಗಿಗಳ ಪುಣ್ಯಸ್ಮರಣೆಯನ್ನು ಆಚರಿಸುತ್ತಾ ಬಂದಿದ್ದಾರೆ. ಅನುಭಾವಿಗಳು, ಮಠಾಧೀಶರು, ವಿದ್ವಾಂಸರು ಈ ಸಮಾರಂಭದಲ್ಲಿ ಭಾಗವಹಿಸಿ ಬಸವಾದಿ ಶರಣ ಜೀವನ ಸಂದೇಶಗಳ ಉಪನ್ಯಾಸ ನೀಡುತ್ತಾ ಬಂದಿದ್ದಾರೆ. ಶಿಕ್ಷಣ ದಾಸೋಹ, ಜ್ಞಾನದಾಸೋಹ, ಪ್ರಸಾದ ದಾಸೋಹ ಮೂರು ಮುಪ್ಪರಿಗೊಂಡಿರುವ ಕ್ಷೇತ್ರವೆಂದರೆ ಶ್ರೀ ಸಿದ್ಧಗಂಗಾ ಕ್ಷೇತ್ರ. ಭಾಗವಹಿಸುವ ಎಲ್ಲರಿಗೂ ವಸತಿ, ಪ್ರಸಾದ ವ್ಯವಸ್ಥೆಗಳನ್ನು ಶ್ರೀಮಠ ಏರ್ಪಡಿಸುತ್ತದೆ. ೧೯೬೩ರಲಿ ೪೪ನೇ ಕನ್ನಡ ಸಾಹಿತ್ಯ ಸಮ್ಮೇಳನ ಪ್ರೊ.ರಂ.ಶ್ರೀ ಮುಗಳಿ ಅವರ ಅಧ್ಯಕ್ಷತೆಯಲ್ಲಿ ಸಿದ್ಧಗಂಗಾ ಕ್ಷೇತ್ರದಲ್ಲಿ ನಡೆಯಿತು. ನಾಡಿನ ಎಲ್ಲ ಕಡೆಗಳಿಂದ ಬಂದ ಸಾಹಿತ್ಯ ಪ್ರಿಯರು ಶ್ರೀಕ್ಷೇತ್ರ ಸೇವೆಯನ್ನು ಹೃದಯ ತುಂಬಿ ಪ್ರಶಂಸಿಸಿದರು. ೧೯೯೭ರಲ್ಲಿ ಶಿವಕುಮಾರ ಸ್ವಾಮಿಗಳಿಗೆ ೯೦ ವರ್ಷ ತುಂಬಿದ ಸಂದರ್ಭದಲ್ಲಿ ಭಕ್ತರು ಗುರುವಂದನ ಸಮಾರಂಭ ಏರ್ಪಡಿಸಿ ಗೌರವಿಸಿದರು. ಲಕ್ಷಾಂತರ ಭಕ್ತರು ದಾಸೋಹ ಸಿರಿ ಎಂಬ ಬೃಹತ್ ಗ್ರಂಥ ಅರ್ಪಿಸಿ ಜನ್ಮ ದಿನ ಆಚರಣೆಗೆ ಸೇರಿ ತಮ್ಮ ಭಕ್ತಿ, ಗೌರವ ತೋರಿದ್ದರು. ಅಂದಿನಿಂದ ಪ್ರತಿವರ್ಷವೂ ಪೂಜ್ಯರ ಜನ್ಮ ದಿನಾಚರಣೆಯನ್ನು ಶ್ರೀ ಕ್ಷೇತ್ರದಲ್ಲಿ ಮತ್ತು ನಾಡಿನ ಎಲ್ಲ ಭಾಗಗಳಲ್ಲಿ ಗುರುವಂದನೆ ಸಮಾರಂಭವಾಗಿ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತಿದೆ. ಈ ಸಮಾರಂಭಗಳಲ್ಲಿ ರಾಷ್ಟ್ರಪತಿಗಳು, ರಾಜ್ಯಪಾಲರು, ಪ್ರಧಾನ ಮಂತ್ರಿಗಳು, ಮುಖ್ಯಮಂತ್ರಿಗಳು ಎಲ್ಲ ಧರ್ಮದ ಧರ್ಮಾಧಿಕಾರಗಳೂ ಭಾಗವಹಿಸುತ್ತಾರೆ. ನ್ಯಾಯಮೂರ್ತಿಗಳ ಹೆಸರಾಂತ ವೈದ್ಯರು, ಶಿಕ್ಷಣವೆತ್ತರನ್ನು ಗುರುತಿಸಿ ಗೌರವಿಸಲಾಗುತ್ತಿದೆ.
೧೯೩೦ರಲ್ಲಿ ಶ್ರೀ ಸಿದ್ಧಗಂಗಾ ಮಠದ ಅಧಿಕಾರ ವಹಿಸಿಕೊಂಡ ಶ್ರೀ ಶಿವಕುಮಾರ ಸ್ವಾಮಿಗಳು ೭೭ ವರ್ಷಗಳಿಂದ ಶ್ರೀ ಕ್ಷೇತ್ರವನ್ನು ಬಹುಮುಖವಾಗಿ ವಿಸ್ತರಿಸಿದ್ದಾರೆ. ದಾಸೋಹಕ್ಕೆ ಮತ್ತೊಂದು ಹೆಸರು ಶ್ರೀ ಸಿದ್ಧಗಂಗಾ ಮಠ ಶ್ರೀ ಶಿವಕುಮಾರ ಸ್ವಾಮಿಗಳು ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಶ್ರೀ ಗಳ ಮಾತೃ ಹೃದಯ, ದೀನರು, ದಲಿತರು, ಬಡವರ ಬಗ್ಗೆ ಸದಾ ಮಿಡಿಯುತ್ತಿರುತ್ತದೆ. ೧೯೭೨ರಲ್ಲಿ ಶ್ರೀ ಶಿವಕುಮಾರ ಸ್ವಾಮಿಗಳ ರಜತಮಹೋತ್ಸವದಲ್ಲಿ ಅಂದಿನ ರಾಷ್ಟ್ರಪತಿ ಶ್ರೀ ನೀಲಂ ಸಂಜೀವರೆಡ್ಡಿ ಅವರು ಭಾಗವಹಿಸಿದ್ದರು. ಪೂಜ್ಯರಿಗೆ ಬೃಹತ್ ಗ್ರಂಥ ಸಿದ್ಧಗಂಗಾ ಶ್ರೀ ಅರ್ಪಿಸಲಾಯಿತು. ೨೦೦೬ರಲ್ಲಿ ೯೯ನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು. ೨೦೦೬ರಿಂದ ವರ್ಷವಿಡೀ ನಾಡಿನ ಎಲ್ಲ ಭಾಗಗಳಲ್ಲಿ ಗುರುವಂದನಾ ಕಾರ್ಯಕ್ರಮಗಳು ಪ್ರತಿದಿನವೂ ಎಂಬಂತೆ ನಡೆಯುತ್ತದೆ.
ಎನಿತು ಜನ್ಮದಲ್ಲಿ, ಎನಿತು ಜೀವರಿಗೆ ಎನಿತು ನಾವು ಋಣಿಯೋ ತಿಳಿದು ನೋಡಿದರೆ ಬಾಳು ಎಂಬುದಿದು ಋಣದ ರತ್ನಗಣಿಯೋ ಎಂದಿದ್ದಾರೆ ಡಾ.ಜಿ.ಎಸ್.ಎಸ್. ಶ್ರೀ ಸಿದ್ಧಗಂಗಾ ಮಠ ತಮಗೆ ೩ ವರ್ಷ (೧೯೪೧-೧೯೪೪) ಆಶ್ರಯ ನೀಡಿದ್ದನ್ನು ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪನವರು ನೆನೆಯುತ್ತಾರೆ. ಅಂದು ಶ್ರೀ ಶಿವಕುಮಾರ ಸ್ವಾಮಿಗಳು ಆಶ್ರಯ ನೀಡದೇ ಹೋಗಿದ್ದರೆ ನನ್ನ ಬದುಕು ಏನಾಗುತ್ತಿತ್ತೋ ಹೇಳಲು ಬಾರದು ಎಂದಿದ್ದಾರೆ. ಆ ದಿನಗಳಲ್ಲೇ ಸುಮಾರು ನಾಲ್ಕು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿದ್ಧಗಂಗಾ ಮಠದಲ್ಲಿ ವಸತಿ ದಾಸೋಹ ಪಡೆದಿದ್ದರು ಎಂದು ಡಾ.ಜಿ.ಎಸ್.ಎಸ್. ದಾಖಲಿಸಿದ್ದಾರೆ. ಭಕ್ತಿ ಎಂಬುದ ಮಾಡಬಾರದು, ಅದು ಹೋಗುತ್ತಲೂ ಕೊಯ್ಯುತ್ತದೆ, ಬರುತ್ತಲೂ ಕೊಯ್ಯುತ್ತದೆ, ಕಾವಿಯೂ ಅಷ್ಟೇ, ಲೋಕದ ಕಣ್ಣಿಗೆ ಪವಿತ್ರವೆಂಬಂತೆ ಕಂಡು ಬಂದರೆ ಸಾಲದು, ತನ್ನ ಒಳಗಣ್ಣಿಗೆ ತಾನೆಷ್ಟು ಪವಿತ್ರ, ಪರಿಶುದ್ಧ ಎಂಬುದನ್ನು ತನಗೆ ತಾನೇ ಒರೆಗೆ ಹಚ್ಚಿ ನೋಡಿಕೊಳ್ಳಬೇಕು, ಜನಮೆಚ್ಚಿ ನಡೆಕೊಂಡರೇನುಂಟು ಜಗದೊಳಗೆ ಮನಮೆಚ್ಚಿ ನಡಕೊಂಬುದೆ ಚಂದವು ಎನ್ನುತ್ತಾರೆ ಪೂಜ್ಯ ಶ್ರೀ ಶಿವಕುಮಾರ ಸ್ವಾಮಿಗಳು. ಸ್ವಾಮಿಗಳಾಗುವವರು ಕಾರುಣ್ಯದ ಕಾರಂಜಿಯಾಗಬೇಕು. ಮಗುವಿನ ಮುಗ್ಧ ಮನಸ್ಸಿನೊಂದಿಗೆ, ಪ್ರಬುದ್ಧ ವಿಚಾರವಂತರೂ, ಶುದ್ಧರೂ ಆಗಿರಬೇಕು.
ಶ್ರೀ ಗಳವರದು ಶುದ್ಧಾಂತಃ ಕರಣ ನಿಜವನರಿದ ನಿಶ್ಚಿಂತ, ಮರಣವಗೆಲಿದ ಮಹಾಂತ, ನೂರು ವರ್ಷ ಜೀವಿಸಿ ಸಾರ್ಥಕ ಸೇವೆಯಲಿ ತೊಡಗಿರುವ ಶತಾಯುಷಿ, ಬಸವ ತತ್ವವೇ ಮೈವೆತ್ತಂತಿರುವ ಪುಣ್ಯಪುರುಷ, ಇಂತಹ ಮಹಾಮಹಿಮರನ್ನು ಕಾಣುವ ಭಾಗ್ಯ, ಅವರ ಜೀವಿತದಲ್ಲಿ ನಾವೂ ಇದ್ದೆವು ಎಂಬುದೇ ಒಂದು ಮಹಾ ಭಾಗ್ಯ.

ಜಯದೇವಪ್ಪ ಜೈನಕೇರಿ
ನಂ.೮೭, ಶಾಂತಲಾ, ಕುವೆಂಪು ರಸ್ತೆ, ಶಿವಮೊಗ್ಗ.
ಕರವೇ ನಲ್ನುಡಿ ಯಲ್ಲಿ ಪ್ರಕಟವಾಗಿದೆ